ಆಗ್ಬರ್ನ್, ಡಬ್ಲ್ಯು. ಎಫ್
(1886-1959). ಪ್ರಸಿದ್ಧ ಸಮಾಜಶಾಸ್ತ್ರಜ್ಞ; ಸಂಯುಕ್ತ ಸಂಸ್ಥಾನದ ಜಾರ್ಜಿಯದಲ್ಲಿ ಬಟ್ಲರ್ ಎಂಬಲ್ಲಿ ಹುಟ್ಟಿದ. ವಿದ್ಯಾಭ್ಯಾಸ ಮರ್ಸರ್ ಮತ್ತು ಕೊಲಂಬಿಯ ವಿಶ್ವವಿದ್ಯಾನಿಲಯಗಳಲ್ಲಿ ಜರುಗಿತು. ಮೊದಲು ಪ್ರಿನ್ಸ್‍ಟನ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾನಿಲಯಗಳಲ್ಲಿ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ ಮತ್ತು ಸಮಾಜವಿಜ್ಞಾನಗಳ ಅಧ್ಯಾಪಕನಾಗಿದ್ದ. ಮುಂದೆ ಕೆಲಕಾಲ ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ಸಮಾಜವಿಜ್ಞಾನದ ಪ್ರಾಧ್ಯಾಪಕನಾಗಿ ಕೆಲಸಮಾಡಿದ. 1951ರಲ್ಲಿ ನಿವೃತ್ತನಾಗಿ ಪ್ರಪಂಚಪರ್ಯಟನ ಕೈಗೊಂಡು ಹೋದೆಡೆಯೆಲ್ಲ ಪ್ರಾಜ್ಞರಿಂದ ಹೆಚ್ಚು ವಿಷಯ ಸಂಗ್ರಹಿಸಿ ಉಪನ್ಯಾಸಗಳನ್ನು ಕೊಟ್ಟ. ಭಾರತಕ್ಕೆ ಬಂದಿದ್ದಾಗ ಕಲ್ಕತ್ತ ಮತ್ತು ದೆಹಲಿ ವಿಶ್ವವಿದ್ಯಾನಿಲಯಗಳಲ್ಲಿ ಅವನ ಉಪನ್ಯಾಸ ನಡೆಯಿತು. ಅಮೆರಿಕ ಸರ್ಕಾರದ ನಾನಾ ಶಾಖೆಗಳಲ್ಲೂ ಸೇವೆ ಸಲ್ಲಿಸಿದ. ಸಮಾಜವಿಜ್ಞಾನಿಗಳು ಸಮಾಜದ ಸ್ಥಿತಿಗತಿಗಳನ್ನು ಮಾತ್ರವೇ ಅಭ್ಯಸಿಸದೆ ಚರಿತ್ರೆ, ರಾಜಕೀಯ, ಸಂಸ್ಕøತಿ, ಸಂಪ್ರದಾಯಗಳು ಮುಂತಾದ ಎಲ್ಲ ಮುಖಗಳನ್ನೂ ಪರಿಶೀಲಿಸಿದಾಗಲೇ ಸಾಮಾಜಿಕ ಸಮಸ್ಯೆಗಳನ್ನು ಬಿಡಿಸಲು ಸಾಧ್ಯವಾಗುತ್ತದೆ-ಎಂದು ಅವನ ಅಭಿಪ್ರಾಯ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ